Breaking News

Wednesday, June 23, 2021

ರೋಹಿಣಿ ಸಿಂಧೂರಿಗೆ ಟಾಂಗ್ ಕೊಟ್ಟ ಐಜಿಪಿ ರೂಪಾ.!

ಬೆಂಗಳೂರು: ಕೊರೊನಾ ಕಾಲದಲ್ಲಿ ಈಜುಕೊಳ ಕಟ್ಟಿದ್ದು ನೈತಿಕ ಅಧಃಪತನ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್ ಮಾಡಿದ್ದಾರೆ. ಈಜುಕೊಳಕ್ಕೆ ಲೈಸೆನ್ಸ್​​ ಪಡೆಯದಿರುವುದು ನಂತರದ ವಿಚಾರ. ಆದರೆ, ಅವರು ಈಜುಕೊಳ ಕಟ್ಟುವುದನ್ನೇ ಮುಂದೂಡಬಹುದಿತ್ತು. ಕೊರೊನಾ ಕಾಲದಲ್ಲಿ ಆರ್ಥಿಕವಾಗಿ ಜನರು ಸಂತ್ರಸ್ತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಜನರ ಹಣ ಬಳಸಿ ಸ್ವಿಮ್ಮಿಂಗ್ ಫೂಲ್ ಕಟ್ಟಿದ್ದು ರೋಹಿಣಿ ಅವರ ನೈತಿಕ ಅಧಃಪತನ ಎಂದು ಅವರು ಆಕ್ಷೇಪಿಸಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರವಾಗಿ ಉದ್ಭವಿಸಿದ್ದ ವಿವಾದದ ಬಗ್ಗೆ ರೋಹಿಣಿ ಸಿಂಧೂರಿ ಪ್ರಾದೇಶಿ ಆಯುಕ್ತರಿಗೆ ವಿವರಣೆ ನೀಡಿದ್ದರು. ಈಜುಕೊಳವನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡಿಲ್ಲ. ಈಜುಕೊಳ ನಿರ್ಮಾಣವು 5 ವರ್ಷಗಳ ಹಿಂದಿನ ಯೋಜನೆ. ಇದರ ನಿರ್ಮಾಣ ವೆಚ್ಚವನ್ನು ನಿರ್ಮಿತಿ ಕೇಂದ್ರವೇ ನಿರ್ವಹಿಸಿದೆ. ಈಜುಕೊಳ ನಿರ್ಮಾಣಕ್ಕೆ ₹ 27.72 ಲಕ್ಷ ವೆಚ್ಚವಾಗಿದೆ. ನಿರ್ಮಿತಿ ಕೇಂದ್ರದ ವಾರ್ಷಿಕ ಸಭೆಯಲ್ಲಿ ಅನುಮೋದನೆ ಪಡೆದೇ ಈಜುಕೊಳ ನಿರ್ಮಿಸಲಾಗಿದೆ ಎಂದು ಹೇಳಿದ್ದರು.
ಜಿಲ್ಲೆಯ ವಿವಿಧೆಡೆ ಉತ್ತಮ ಗುಣಮಟ್ಟದ ಈಜುಕೊಳಗಳ ನಿರ್ಮಾಣ ಮಾಡುವ ಉದ್ದೇಶ ಆ ಯೋಜನೆಯದ್ದಾಗಿತ್ತು. ಅದರಂತೆ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿ ನಿವಾಸದಲ್ಲಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾಧಿಕಾರಿ ನಿವಾಸವು 5.15 ಎಕರೆ ಪ್ರದೇಶದಲ್ಲಿದೆ. ಅದರ ಸಣ್ಣಭಾಗದಲ್ಲಿ ಈಜುಕೊಳ ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು.
ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಆರೋಪದ ಬಗ್ಗೆಯೂ ವಿವರಣೆ ನೀಡಿರುವ ಅವರು, ಈಗಾಗಲೇ ಹಲವಾರು ಪಾರಂಪರಿಕ ಕಟ್ಟಡಗಳ ಪಕ್ಕದಲ್ಲಿ ಇತರ ಕಟ್ಟಡ‌ಗಳನ್ನೂ ನಿರ್ಮಿಸಲಾಗಿದೆ. ಚುನಾವಣಾ ಶಾಖೆ‌, ವಸಂತ ಮಹಲ್, ಪ್ರಾದೇಶಿಕ ಆಯುಕ್ತರ ಕಚೇರಿ, ಜಲದರ್ಶಿನಿ ಆವರಣ ಸೇರಿ ಹಲವು ಕಡೆ ಕಟ್ಟಡಗಳ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಜುಕೊಳ ನಿರ್ಮಾಣ ಕಾನೂನುಬಾಹಿರ ಅಲ್ಲ ಎಂದು ತಮ್ಮ ವರದಿಯಲ್ಲಿ ರೋಹಿಣಿ ಸಿಂಧೂರಿ ಸಮರ್ಥಿಸಿಕೊಂಡಿದ್ದರು.

No comments:

Post a Comment